Bible Versions
Bible Books

:

1 ನನ್ನ ಮಗನೇ, ನನ್ನ ಉಪದೇಶವನ್ನು ಮರೆಯಬೇಡ. ನನ್ನ ಆಜ್ಞೆಗಳನ್ನು ಜ್ಞಾಪಕದಲ್ಲಿಟ್ಟುಕೊ.
2 ಅವು ನಿನಗೆ ದೀರ್ಘಾಯುಷ್ಯವನ್ನು ನೀಡಿ ಸಂತೋಷ ಸಮಾಧಾನಗಳಿಂದ ಕೂಡಿದ ಜೀವಿತವನ್ನು ಕೊಡುತ್ತವೆ.
3 ಪ್ರೀತಿಯೂ ನಂಬಿಗಸ್ತಿಕೆಯೂ ನಿನ್ನನ್ನು ಬಿಟ್ಟು ಹೋಗದಿರಲಿ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಬರೆದುಕೊ.
4 ಆಗ ನೀನು ದೇವರಿಂದಲೂ ಮನುಷ್ಯರಿಂದಲೂ ಮೆಚ್ಚಿಕೆಯನ್ನು ಮತ್ತು ಒಳ್ಳೆಯ ಹೆಸರನ್ನು ಸಂಪಾದಿಸಿಕೊಳ್ಳುವೆ.
5 ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆ ಇಡು. ನಿನ್ನ ಸ್ವಂತ ಜ್ಞಾನವನ್ನು ಅವಲಂಬಿಸಬೇಡ.
6 ನಿನ್ನ ಎಲ್ಲಾ ಕಾರ್ಯಗಳಲ್ಲಿ ಆತನನ್ನು ಜ್ಞಾಪಿಸಿಕೊ. ಆಗ ಆತನು ನಿನಗೆ ಸಹಾಯ ಮಾಡುವನು.
7 ನಿನ್ನನ್ನು ಜ್ಞಾನಿಯೆಂದು ಪರಿಗಣಿಸಿಕೊಳ್ಳದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದರಿಂದ ದೂರವಾಗಿರು.
8 ನೀನು ಹೀಗೆ ಮಾಡುವುದಾದರೆ, ಅದು ನಿನ್ನ ದೇಹಕ್ಕೆ ಒಳ್ಳೆಯ ಆರೋಗ್ಯವನ್ನೂ ನಿನ್ನ ಎಲುಬುಗಳಿಗೆ ಹೊಸ ಶಕ್ತಿಯನ್ನೂ ಕೊಡುವುದು.
9 ನಿನಗೆ ಬರುವ ಆದಾಯದಿಂದಲೂ ಬೆಳೆಯ ಪ್ರಥಮ ಫಲದಿಂದಲೂ ಯೆಹೋವನನ್ನು ಸನ್ಮಾನಿಸು.
10 ಆಗ ನಿನ್ನ ಕಣಜಗಳು ದವಸಧಾನ್ಯಗಳಿಂದ ತುಂಬಿರುತ್ತವೆ. ನಿನ್ನ ದ್ರಾಕ್ಷಾರಸದ ತೊಟ್ಟಿಗಳು ತುಂಬಿತುಳುಕುತ್ತವೆ.
11 ನನ್ನ ಮಗನೇ, ಯೆಹೋವನು ನಿನ್ನನ್ನು ಶಿಕ್ಷಿಸುವಾಗ ಕೋಪಗೊಳ್ಳಬೇಡ. ಆತನು ಗದರಿಸುವಾಗ ಬೇಸರಪಡಬೇಡ.
12 ತಂದೆಯು ತನ್ನ ಮಗನನ್ನು ಗದರಿಸುವಂತೆಯೇ ಯೆಹೋವನು ತಾನು ಪ್ರೀತಿಸುವವರನ್ನು ಶಿಕ್ಷಿಸುತ್ತಾನೆ.
13 ಜ್ಞಾನವನ್ನು ಕಂಡುಕೊಂಡು ವಿವೇಕವನ್ನು ಸಂಪಾದಿಸಿಕೊಳ್ಳುವವನೇ ಭಾಗ್ಯವಂತನು.
14 ಜ್ಞಾನವು ಬೆಳ್ಳಿಗಿಂತಲೂ ಲಾಭದಾಯಕ. ಅದರ ಆದಾಯವು ಬಂಗಾರಕ್ಕಿಂತಲೂ ಅಧಿಕ.
15 ಜ್ಞಾನವು ರತ್ನಕ್ಕಿಂತಲೂ ಅಮೂಲ್ಯವಾದದ್ದು. ನಿನ್ನ ಇಷ್ಟ ವಸ್ತುಗಳಲ್ಲಿ ಯಾವುದೂ ಅದಕ್ಕೆ ಸಮವಿಲ್ಲ.
16 ಜ್ಞಾನವೆಂಬಾಕೆಯ ಬಲಗೈಯಿಂದ ದೀರ್ಘಾಯುಷ್ಯವೂ ಎಡಗೈಯಿಂದ ಐಶ್ವರ್ಯವೂ ಘನತೆಯೂ ಬರುವವು.
17 ಜ್ಞಾನವು ನಿನ್ನ ಜೀವನವನ್ನು ಸುಖಕರವನ್ನಾಗಿ ಮಾಡುತ್ತದೆ; ಸಮಾಧಾನವನ್ನು ಬರಮಾಡುತ್ತದೆ.
18 ಜ್ಞಾನವು ತನ್ನನ್ನು ಅವಲಂಬಿಸಿಕೊಳ್ಳುವವರಿಗೆ ಜೀವದಾಯಕ ಮರದಂತಿದೆ. ಅದನ್ನು ಹೊಂದಿರುವವರು ಧನ್ಯರಾಗಿದ್ದಾರೆ.
19 ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸೃಷ್ಟಿಸಿದನು. ಆತನು ವಿವೇಕದ ಮೂಲಕ ಆಕಾಶವನ್ನು ಸೃಷ್ಟಿಸಿದನು.
20 ಯೆಹೋವನು ತನ್ನ ತಿಳುವಳಿಕೆಯಿಂದ ಸಮುದ್ರಗಳನ್ನು ವಿಭಜಿಸಿದನು. ಮೋಡವು ಮಳೆಸುರಿಸುವುದಕ್ಕೆ ಆತನ ತಿಳುವಳಿಕೆಯೇ ಕಾರಣ.
21 ನನ್ನ ಮಗನೇ, ಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ. ನಿನ್ನ ದೃಷ್ಟಿಯು ಅವುಗಳ ಮೇಲೇ ಇರಲಿ.
22 ಜ್ಞಾನವಿವೇಕಗಳು ನಿನಗೆ ಜೀವವನ್ನೂ ನಿನ್ನ ಜೀವಿತಕ್ಕೆ ಸೌಂದರ್ಯವನ್ನೂ ನೀಡುತ್ತವೆ.
23 ಆಗ ನೀನು ಎಡವಿಬೀಳದೆ ಸುರಕ್ಷಿತವಾಗಿ ನಡೆಯುವೆ.
24 ಆಗ ನೀನು ನಿರ್ಭಯದಿಂದ ಮಲಗಿಕೊಂಡು ಸುಖವಾಗಿ ನಿದ್ರಿಸುವೆ.
25 ದುಷ್ಟರ ಮೇಲೆ ಇದ್ದಕ್ಕಿದ್ದಂತೆ ಬರುವ ಅಪಾಯಕ್ಕಾಗಲಿ ನಾಶನಕ್ಕಾಗಲಿ ಹೆದರಿಕೊಳ್ಳಬೇಡ.
26 ಯೆಹೋವನು ನಿನ್ನೊಂದಿಗಿದ್ದಾನೆ. ನೀನು ಬಲೆಗೆ ಸಿಕ್ಕಿಬೀಳದಂತೆ ಆತನು ನಿನ್ನನ್ನು ಕಾಪಾಡುತ್ತಾನೆ.
27 ನಿನಗೆ ಸಾಧ್ಯವಾದಾಗಲೆಲ್ಲಾ ಉಪಕಾರಮಾಡು.
28 ನಿನ್ನ ನೆರೆಯವನಿಗೆ ಕೊಡತಕ್ಕದ್ದು ನಿನ್ನಲ್ಲಿರುವಾಗ, “ನಾಳೆ ಬಾ, ಕೊಡುತ್ತೇನೆ” ಎಂದು ಹೇಳಬೇಡ.
29 ನಿನ್ನ ನೆರೆಯವನಿಗೆ ಕೇಡನ್ನು ಕಲ್ಪಿಸಬೇಡ. ನಿನ್ನ ಸುರಕ್ಷತೆಗಾಗಿಯೇ ನಿನ್ನ ನೆರೆಯವನ ಸಮೀಪದಲ್ಲಿ ವಾಸಿಸುತ್ತಿದ್ದೀಯಲ್ಲಾ!
30 ನಿನಗೆ ಕೇಡನ್ನು ಮಾಡಿಲ್ಲದಿರುವವನನ್ನು ನಿಷ್ಕಾರಣವಾಗಿ ನ್ಯಾಯಾಲಯಕ್ಕೆ ಕೊಂಡೊಯ್ಯಬೇಡ.
31 ಬಲಾತ್ಕಾರಿಯನ್ನು ಕಂಡು ಹೊಟ್ಟೆಕಿಚ್ಚುಪಡಬೇಡ; ಅವನ ನಡತೆಯನ್ನು ಅನುಸರಿಸಬೇಡ.
32 ಯೆಹೋವನಿಗೆ ವಕ್ರಬುದ್ಧಿಯುಳ್ಳವರು ಅಸಹ್ಯ. ಆದರೆ ಆತನು ಯಥಾರ್ಥರೊಂದಿಗೆ ಸ್ನೇಹದಿಂದಿರುವನು.
33 ದುಷ್ಟರ ಮನೆಯ ಮೇಲೆ ಯೆಹೋವನ ಶಾಪವಿರುವುದು; ಆದರೆ ನೀತಿವಂತರ ಮನೆಯ ಮೇಲೆ ಆತನ ಆಶೀರ್ವಾದವಿರುವುದು.
34 ಯಾರು ಗರ್ವದಿಂದ ಬೇರೆಯವರನ್ನು ಗೇಲಿಮಾಡುತ್ತಾರೊ ಅವರನ್ನು ಯೆಹೋವನೂ ಗೇಲಿಮಾಡುತ್ತಾನೆ. ದೀನರಿಗಾದರೋ ಆತನ ಕರುಣೆ ದೊರೆಯುವುದು.
35 ಜ್ಞಾನಿಗಳು ಸನ್ಮಾನ ಹೊಂದುವರು; ಮೂಢರಿಗೆ ಅವಮಾನವಾಗುವುದು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×