Bible Versions
Bible Books

Job 35 (ERVKN) Easy to Read Version - Kannadam

1 ಎಲೀಹು ಮಾತನ್ನು ಮುಂದುವರಿಸಿ,
2 “ಯೋಬನೇ, ‘ನಾನು ದೇವರಿಗಿಂತ ನೀತಿವಂತನೆಂದು’ ನೀನು ಹೇಳುವುದು ನ್ಯಾಯವಲ್ಲ.
3 ಅಲ್ಲದೆ ನೀನು ದೇವರಿಗೆ, ‘ಮನುಷ್ಯನು ಪಾಪ ಮಾಡದೆ ದೇವರನ್ನು ಮೆಚ್ಚಿಸುವುದರಿಂದ ಅವನಿಗೆ ಪ್ರಯೋಜನವೇನು? ನಾನು ಪಾಪಮಾಡದಿದ್ದರೆ ನನಗೇನು ಒಳಿತಾಗುವುದು’ ಎಂದು ಕೇಳು.
4 “ಯೋಬನೇ, ನಾನು ನಿನಗೂ ನಿನ್ನೊಂದಿಗಿರುವ ಸ್ನೇಹಿತರಿಗೂ ಉತ್ತರಕೊಡುವೆ.
5 ಕಣ್ಣೆತ್ತಿ ಆಕಾಶವನ್ನು ನೋಡು. ಮೋಡಗಳನ್ನು ದೃಷ್ಟಿಸು, ಅವು ನಿನಗಿಂತ ಎಷ್ಟೋ ಎತ್ತರವಾಗಿವೆ.
6 ಯೋಬನೇ, ನೀನು ಪಾಪಮಾಡಿದರೆ, ಅದರಿಂದ ದೇವರಿಗೇನೂ ಕೇಡಾಗುವುದಿಲ್ಲ. ನೀನು ಅನೇಕ ಪಾಪಗಳನ್ನು ಮಾಡಿದ್ದರೂ ಅದರಿಂದ ದೇವರಿಗೇನೂ ಆಗುವುದಿಲ್ಲ.
7 ಯೋಬನೇ, ನೀನು ಒಳ್ಳೆಯವನಾಗಿದ್ದರೆ, ಅದರಿಂದ ದೇವರಿಗೇನೂ ಸಹಾಯವಾಗುವುದಿಲ್ಲ. ದೇವರಿಗೆ ನಿನ್ನಿಂದೇನೂ ಲಾಭವಾಗುವುದಿಲ್ಲ.
8 ಯೋಬನೇ, ನಿನ್ನ ದುಷ್ಟತನದಿಂದ ನಿನ್ನಂಥವನಿಗೇ ಕೇಡಾಗುವುದು; ನಿನ್ನ ಒಳ್ಳೆಯಕಾರ್ಯಗಳಿಂದ ನಿನ್ನಂಥವನಿಗೇ ಒಳ್ಳೆಯದಾಗುವುದು.
9 “ಹಿಂಸೆಗೂ ಅನ್ಯಾಯಕ್ಕೂ ಒಳಗಾಗಿರುವವರು ತಮ್ಮನ್ನು ಬಲಿಷ್ಠರಿಂದ ಬಿಡಿಸಬಲ್ಲ ಯಾರಿಗಾದರೂ ಮೊರೆಯಿಡುವರು.
10 ಆದರೆ ಕೆಟ್ಟ ಜನರು ಸಹಾಯಕ್ಕಾಗಿ ದೇವರನ್ನು ಕೇಳಿಕೊಳ್ಳುವುದಿಲ್ಲ. ಅವರು, ‘ನನ್ನನ್ನು ಸೃಷ್ಟಿಸಿದ ದೇವರೆಲ್ಲಿ?’ ಎಂದು ಕೇಳುವುದಿಲ್ಲ. ‘ಕುಗ್ಗಿಹೋದವರಿಗೆ ಸಹಾಯಮಾಡುವ ದೇವರೆಲ್ಲಿ?’ ಎಂದು ಕೇಳುವುದಿಲ್ಲ.
11 ನಮ್ಮನ್ನು ಪಕ್ಷಿಗಳಿಗಿಂತಲೂ ಪ್ರಾಣಿಗಳಿಗಿಂತಲೂ ಜ್ಞಾನಿಗಳನ್ನಾಗಿ ಮಾಡುವ ದೇವರೆಲ್ಲಿ?’ ಎಂದು ಅವರು ಕೇಳುವುದಿಲ್ಲ.
12 “ಅಲ್ಲದೆ ಕೆಟ್ಟವರು ದೇವರನ್ನು ಸಹಾಯಕ್ಕಾಗಿ ಕೇಳಿಕೊಂಡರೂ ಆತನು ಅವರಿಗೆ ಉತ್ತರಿಸುವುದಿಲ್ಲ. ಯಾಕೆಂದರೆ ಅವರು ದುಷ್ಟರೂ ದುರಾಭಿಮಾನಿಗಳೂ ಆಗಿದ್ದಾರೆ.
13 ಹೌದು, ದೇವರು ಅವರ ಬೆಲೆಯಿಲ್ಲದ ಬೇಡಿಕೆಯನ್ನು ಕೇಳುವುದಿಲ್ಲ; ಸರ್ವಶಕ್ತನಾದ ದೇವರು ಅವರಿಗೆ ಗಮನ ಕೊಡುವುದಿಲ್ಲ.
14 ಯೋಬನೇ, ನೀನು, ‘ದೇವರನ್ನು ಕಾಣಲಾರೆನು’ ಎಂದು ಹೇಳುವಾಗ ಆತನು ನಿನಗೆ ಕಿವಿಗೊಡುವುದಿಲ್ಲ. ನಿನ್ನ ವ್ಯಾಜ್ಯವು ಆತನ ಮುಂದೆ ಇರುವುದರಿಂದ ನೀನು ಆತನಿಗಾಗಿ ಕಾದುಕೊಂಡಿರಬೇಕು.
15 “ದೇವರು ಕೆಟ್ಟಜನರನ್ನು ದಂಡಿಸುವುದಿಲ್ಲ; ಪಾಪವನ್ನು ಗಮನಿಸುವುದಿಲ್ಲ ಎಂಬುದು ಯೋಬನ ಆಲೋಚನೆ.
16 ಆದ್ದರಿಂದ ಯೋಬನು ತನ್ನ ನಿಷ್ಪ್ರಯೋಜಕ ಮಾತನ್ನು ಮುಂದುವರಿಸುತ್ತಿದ್ದಾನೆ; ದುರಾಭಿಮಾನದಿಂದ ವರ್ತಿಸುತ್ತಿದ್ದಾನೆ; ತಿಳುವಳಿಕೆಯಿಲ್ಲದೆ ಮಾತಾಡುತ್ತಿದ್ದಾನೆ.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×