Bible Versions
Bible Books

:

1 ದ್ರಾಕ್ಷಾರಸವು ಪರಿಹಾಸ್ಯಕ್ಕೂ ಮದ್ಯವು ಕೂಗಾಟಕ್ಕೂ ನಡೆಸುತ್ತವೆ. ಅಮಲೇರಿಸಿಕೊಳ್ಳುವುದು ಮೂರ್ಖತನ.
2 ರಾಜನ ಕೋಪವು ಸಿಂಹದ ಬರ್ಜನೆಯಂತಿದೆ. ರಾಜನನ್ನು ಕೋಪಗೊಳಿಸಿದರೆ ಪ್ರಾಣಕ್ಕೆ ಹಾನಿ.
3 ವಾದದಿಂದ ದೂರವಿರುವವನು ಸನ್ಮಾನಕ್ಕೆ ಯೋಗ್ಯನು. ಮೂಢನಾದರೊ ಜಗಳಕ್ಕೇ ಆತುರ ಪಡುವನು.
4 ಸೋಮಾರಿಯು ಬಿತ್ತನೆಕಾಲದಲ್ಲಿ ಬೀಜ ಬಿತ್ತುವುದಿಲ್ಲ; ಸುಗ್ಗಿಕಾಲದಲ್ಲಿ ಅವನಿಗೆ ಬೆಳೆಯೂ ಇರುವುದಿಲ್ಲ.
5 ಬೇರೊಬ್ಬನ ಆಲೋಚನೆಗಳನ್ನು ನೋಡಲು ಸಾಧ್ಯವಿಲ್ಲ; ಅವು ಆಳವಾದ ನೀರಿನಂತಿವೆ; ಆದರೆ ಅವುಗಳನ್ನು ವಿವೇಕಿಯು ಅರ್ಥಮಾಡಿಕೊಳ್ಳಬಲ್ಲನು.
6 ಅನೇಕರು ತಾವು ನಂಬಿಗಸ್ತರೆಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾಗಿಯೂ ನಂಬಿಗಸ್ತನಾಗಿರುವ ಒಬ್ಬನನ್ನು ಕಂಡುಕೊಳ್ಳುವುದು ಬಹುಕಷ್ಟ.
7 ಸದ್ದರ್ಮಿಯು ಒಳ್ಳೆಯ ರೀತಿಯಲ್ಲಿ ಜೀವಿಸುತ್ತಾನೆ; ಅವನ ಮಕ್ಕಳಿಗೆ ಆಶೀರ್ವಾದವಾಗುವುದು.
8 ರಾಜನು ನ್ಯಾಯತೀರ್ಪು ಮಾಡುವಾಗ ತನ್ನ ಕಣ್ಣುಗಳಿಂದ ದುಷ್ಟತನವನ್ನು ಶೋಧಿಸುವನು.
9 ಯಾವನಾದರೂ, “ನನ್ನ ಹೃದಯವನ್ನು ಶುದ್ಧೀಕರಿಸಿರುವೆ. ನಾನು ಪಾಪರಹಿತನಾಗಿರುವೆ” ಎಂದು ಹೇಳಲು ಸಾಧ್ಯವೇ?
10 ಮೋಸದ ತಕ್ಕಡಿಗಳೂ ಮೋಸದ ಅಳತೆಮಾಪಕಗಳೂ ಯೆಹೋವನಿಗೆ ಅಸಹ್ಯ.
11 ಬಾಲಕನೊಬ್ಬನು ಒಳ್ಳೆಯವನೋ ಕೆಟ್ಟವನೋ ಎಂಬುದು ಅವನ ನಡತೆಯಿಂದಲೇ ತೋರಿಬರುವುದು.
12 ನಮಗೆ ನೋಡಲು ಕಣ್ಣುಗಳಿವೆ. ಕೇಳಲು ಕಿವಿಗಳಿವೆ. ಅವುಗಳನ್ನು ನಮಗೋಸ್ಕರ ಉಂಟುಮಾಡಿದವನು ಯೆಹೋವನೇ.
13 ನಿದ್ರಾನಿರತನಾಗಿರಬೇಡ, ಬಡವನಾಗುವೆ. ನಿನ್ನ ಸಮಯವನ್ನು ದುಡಿಯಲು ಉಪಯೋಗಿಸಿಕೊಂಡರೆ ನಿನಗೆ ಊಟಕ್ಕೆ ಬೇಕಾದಷ್ಟಿರುವುದು.
14 ನಿನ್ನ ವಸ್ತುವನ್ನು ಖರೀದಿಮಾಡುವವನು, “ಇದು ಚೆನ್ನಾಗಿಲ್ಲ! ಬೆಲೆಯೂ ಜಾಸ್ತಿ!” ಎಂದು ಹೇಳುವನು. ಬಳಿಕ ತನ್ನ ಚೌಕಾಸಿಯ ಬಗ್ಗೆ ಬೇರೆಯವರ ಮುಂದೆ ಹೊಗಳಿಕೊಳ್ಳುವನು.
15 ಬಂಗಾರಕ್ಕಿಂತಲೂ ಮಾಣಿಕ್ಯದ ಸಮೃದ್ಧಿಗಿಂತಲೂ ಜ್ಞಾನದ ಮಾತುಗಳನ್ನಾಡುವ ತುಟಿಗಳು ಅಮೂಲ್ಯವಾಗಿವೆ.
16 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾದರೆ, ನಿನ್ನ ಅಂಗಿಯನ್ನು ಕಳೆದುಕೊಳ್ಳುವೆ.
17 ಅನ್ಯಾಯವಾಗಿ ಗಳಿಸಿದ ಆಹಾರವು ಆರಂಭದಲ್ಲಿ ರುಚಿಕರವಾಗಿದ್ದರೂ ಕೊನೆಯಲ್ಲಿ ಬಾಯಿತುಂಬ ಮರಳಿನಂತಿರುವುದು.
18 ಒಳ್ಳೆಯ ಸಮಾಲೋಚನೆಗಳೊಡನೆ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ನೀನು ಯುದ್ಧವನ್ನು ಆರಂಭಿಸುವುದಾಗಿದ್ದರೆ, ಮಾರ್ಗದರ್ಶನಕ್ಕಾಗಿ ಒಳ್ಳೆಯವರನ್ನು ಹುಡುಕು.
19 ಬೇರೆಯವರ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುವವನನ್ನು ನಂಬಬೇಡ; ಅತಿಯಾಗಿ ಮಾತಾಡುವವನ ಸ್ನೇಹಿತನೂ ಆಗಬೇಡ.
20 ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನ ಜೀವಿತವು ಕತ್ತಲೆಯಲ್ಲಿ ಆರಿಹೋದ ದೀಪದಂತೆ ಕೊನೆಗೊಳ್ಳುವುದು.
21 ಸುಲಭವಾಗಿ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಆರ್ಶೀವಾದದಾಯಕವಾಗಿರುವುದಿಲ್ಲ.
22 “ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡುತ್ತೇನೆ” ಎಂದು ಹೇಳಬೇಡ. ಯೆಹೋವನಿಗಾಗಿ ಕಾದುಕೊಂಡಿರು! ಆತನು ನಿನ್ನನ್ನು ಜಯಶಾಲಿಯನ್ನಾಗಿ ಮಾಡುವನು.
23 ಯೆಹೋವನಿಗೆ ಅನ್ಯಾಯದ ಅಳತೆಮಾಪಕವು ಅಸಹ್ಯ; ಮೋಸದ ತಕ್ಕಡಿಗಳು ಅಪರಾಧ.
24 ಭವಿಷ್ಯತ್ತನ್ನು ನಿರ್ಣಯಿಸುವವನು ಯೆಹೋವನೇ ಆಗಿರುವಾಗ, ತನ್ನ ಭವಿಷ್ಯತ್ತನ್ನು ಅರ್ಥಮಾಡಿಕೊಳ್ಳಲು ಯಾರಿಗೆ ಸಾಧ್ಯ?
25 ನೀನು ದೇವರಿಗೆ ಹರಕೆ ಮಾಡುವ ಮೊದಲೇ ಎಚ್ಚರಿಕೆಯಿಂದ ಯೋಚಿಸು. ಹರಕೆ ಮಾಡಿದ ಮೇಲೆ ಹರಕೆ ಮಾಡಬಾರದಾಗಿತ್ತು ಎಂದು ಹೇಳಬೇಡ.
26 ಜ್ಞಾನಿಯಾದ ರಾಜನಿಗೆ ಕೆಡುಕರು ಯಾರೆಂಬುದು ಗೊತ್ತಾಗುವುದು; ಅವನು ಅವರನ್ನು ದಂಡಿಸುವನು.
27 ಮನುಷ್ಯನ ಆತ್ಮ ಯೆಹೋವನ ದೀಪವಾಗಿದೆ; ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ.
28 ರಾಜನು ನಂಬಿಗಸ್ತನಾಗಿಯೂ ಪ್ರೀತಿಯುಳ್ಳವನಾಗಿಯೂ ಇದ್ದರೆ, ಅವನ ಅಧಿಕಾರ ಉಳಿದುಕೊಳ್ಳುವುದು; ಅವನ ಆಡಳಿತ ಮುಂದುವರಿಯುವುದು.
29 ಯುವಕನ ಶಕ್ತಿ ಪ್ರಶಂಸೆಗೆ ಯೋಗ್ಯ. ವೃದ್ಧನ ನರೆಕೂದಲು ಗೌರವಕ್ಕೆ ಪಾತ್ರ.
30 ದಂಡನೆಯು ತಪ್ಪನ್ನು ನಿಲ್ಲಿಸುತ್ತದೆ; ನೋವು ವ್ಯಕ್ತಿಯನ್ನು ಬದಲಾಯಿಸುತ್ತದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×