Bible Versions
Bible Books

Psalms 144 (ERVKN) Easy to Read Version - Kannadam

1 ಯೆಹೋವನು ನನಗೆ ಬಂಡೆಯಾಗಿದ್ದಾನೆ. ಆತನಿಗೆ ಸ್ತೋತ್ರವಾಗಲಿ. ಆತನು ನನ್ನನ್ನು ಯುದ್ಧಕ್ಕೂ ಕದನಕ್ಕೂ ತರಬೇತು ಮಾಡುವನು.
2 ಆತನು ನನ್ನನ್ನು ಪ್ರೀತಿಸುವ ದೇವರೂ ನನ್ನ ಕೋಟೆಯೂ ನನ್ನ ದುರ್ಗವೂ ನನ್ನ ರಕ್ಷಕನೂ ನನ್ನ ಗುರಾಣಿಯೂ ನನ್ನ ಆಶ್ರಯವೂ ಆಗಿದ್ದಾನೆ.
3 ಯೆಹೋವನೇ, ಮನುಷ್ಯನು ಎಷ್ಟು ಮಾತ್ರದವನು? ನೀನು ಅವನನ್ನು ಯಾಕೆ ನೆನಸಬೇಕು? ಮನುಷ್ಯನು ಎಷ್ಟರವನು? ನೀನು ಅವನನ್ನು ಯಾಕೆ ಗಮನಿಸಬೇಕು?
4 ಮನುಷ್ಯನು ಕೇವಲ ಉಸಿರೇ. ಅವನ ಜೀವಮಾನವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.
5 ಯೆಹೋವನೇ, ಆಕಾಶವನ್ನು ಹರಿದು ಇಳಿದು ಬಾ. ಪರ್ವತಗಳನ್ನು ಮುಟ್ಟು. ಆಗ ಅವುಗಳಿಂದ ಹೊಗೆಯು ಮೇಲೇರುವುದು.
6 ಸಿಡಿಲಿನಿಂದ ಶತ್ರುಗಳನ್ನು ಚದರಿಸಿಬಿಡು. ನಿನ್ನ ಬಾಣಗಳಿಂದ ಅವರನ್ನು ಓಡಿಸಿಬಿಡು.
7 ಮೇಲಣ ಲೋಕದಿಂದ ಕೈಚಾಚಿ ಮಹಾ ಜಲರಾಶಿಯಂತಿರುವ ನನ್ನ ಶತ್ರುಗಳಿಂದ ನನ್ನನ್ನು ಎಳೆದುಕೋ. ಅನ್ಯಜನರ ಕೈಯಿಂದ ನನ್ನನ್ನು ಬಿಡಿಸು.
8 ಅವರ ಬಾಯಿ ಸುಳ್ಳುಗಳಿಂದ ತುಂಬಿವೆ. ಅವರ ಬಲಗೈ ಮೋಸದಿಂದ ತುಂಬಿವೆ.
9 ಯೆಹೋವನೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು. ನಾನು ಹತ್ತುತಂತಿಗಳ ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಸ್ತುತಿಸುವೆನು.
10 ರಾಜರುಗಳಿಗೆ ಸಹಾಯಮಾಡಿ ಯುದ್ಧಗಳಲ್ಲಿ ಗೆಲ್ಲಿಸುವವನೂ ನೀನೇ. ನಿನ್ನ ಸೇವಕನಾದ ದಾವೀದನನ್ನು ಅವನ ಶತ್ರುಗಳ ಖಡ್ಗಗಳಿಂದ ರಕ್ಷಿಸಿದವನೂ ನೀನೇ.
11 ಅನ್ಯಜನರಿಂದ ನನ್ನನ್ನು ರಕ್ಷಿಸು. ಅವರ ಬಾಯಿಗಳು ಸುಳ್ಳುಗಳಿಂದ ತುಂಬಿವೆ. ಅವರ ಬಲಗೈಗಳು ಮೋಸದಿಂದ ತುಂಬಿವೆ.
12 ನಮ್ಮ ಯುವಕರು ಮಹಾವೃಕ್ಷಗಳಂತಿದ್ದಾರೆ. ನಮ್ಮ ಯುವತಿಯರು ಅರಮನೆಯಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳಂತಿರುವರು.
13 ನಮ್ಮ ಕಣಜಗಳು ಸಕಲ ಬಗೆಯ ದವಸಧಾನ್ಯಗಳಿಂದ ತುಂಬಿರುತ್ತವೆ. ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುತ್ತವೆ.
14 ನಮ್ಮ ಸೈನಿಕರು ಸುರಕ್ಷಿತವಾಗಿದ್ದಾರೆ. ಯಾವ ಶತ್ರುಗಳೂ ನುಗ್ಗಿ ಬರಲು ಪ್ರಯತ್ನಿಸುತ್ತಿಲ್ಲ. ನಾವು ಯುದ್ಧಕ್ಕೆ ಹೋಗುವುದೂ ಇಲ್ಲ; ನಮ್ಮ ಬೀದಿಗಳಲ್ಲಿ ಗೋಳಾಟವೂ ಇರುವುದಿಲ್ಲ.
15 ಇಂಥ ಸುಸ್ಥಿತಿಯಲ್ಲಿರುವ ಜನರೇ ಧನ್ಯರು. ಯಾರಿಗೆ ಯೆಹೋವನು ದೇವಾರಾಗಿರುತ್ತಾನೊ ಅವರೇ ಭಾಗ್ಯವಂತರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×