1 ಯೋತಾವುನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಇವನ ತಾಯಿ ಚಾದೋಕನ ಮಗಳಾದ ಯೆರೂಷ.
2 ಯೋತಾವುನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಉಜ್ಜೀಯನಂತೆ ಅವನೂ ದೇವರಿಗೆ ವಿಧೇಯನಾಗಿ ನಡೆದುಕೊಂಡನು. ಆದರೆ ತನ್ನ ತಂದೆಯು ದೇವಾಲಯವನ್ನು ಪ್ರವೇಶಿಸಿ ಧೂಪಹಾಕಿದಂತೆ ಇವನು ಮಾಡಲಿಲ್ಲ. ಜನರು ಮಾತ್ರ ಕೆಟ್ಟಕಾರ್ಯಗಳಲ್ಲಿಯೇ ಮುಂದುವರೆದರು.
3 ಯೋತಾವುನು ದೇವಾಲಯದ ಮೇಲಿನ ಬಾಗಿಲನ್ನು ತಿರುಗಿ ಕಟ್ಟಿಸಿದನು. ಪೌಳಿ ಗೋಡೆಯ ಮೇಲೆ ಓಫೇಲ್ ಎಂಬ ಸ್ಥಳದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು.
4 ಯೋತಾವುನು ಯೆಹೂದದ ಬೆಟ್ಟಪ್ರದೇಶಗಳಲ್ಲಿ ಪಟ್ಟಣಗಳನ್ನು ಮತ್ತು ಕಾಡಿನೊಳಗೆ ಗೋಪುರಗಳನ್ನು ಕಟ್ಟಿಸಿದನು.
5 ಯೋತಾವುನು ಅಮ್ಮೋನಿಯರ ಸೈನ್ಯದೊಡನೆ ಕಾದಾಡಿ ಜಯಗಳಿಸಿದನು. ಅವರು ಪ್ರತಿ ವರ್ಷ ಮೂರು ವರ್ಷಗಳ ಕಾಲ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬೆಳ್ಳಿ, ಅರವತ್ತೆರಡು ಸಾವಿರ ಬುಷೆಲ್ ಗೋಧಿಯನ್ನೂ, ಅರವತ್ತೆರಡು ಸಾವಿರ ಬುಷೆಲ್ ಜವೆಗೋಧಿಯನ್ನೂ ಯೋತಾವುನಿಗೆ ಕಾಣಿಕೆಯಾಗಿ ಕೊಟ್ಟರು.
6 ಯೋತಾವುನು ದೇವರಿಗೆ ವಿಧೇಯನಾಗಿ ಜೀವಿಸಿದ್ದ ಕಾರಣ ಬಲಿಷ್ಠನಾದ ರಾಜನಾದನು.
7 ಅವನು ಮಾಡಿದ ಬೇರೆ ಕಾರ್ಯಗಳು ಮತ್ತು ನಡಿಸಿದ ಯುದ್ಧಗಳ ವಿಷಯ ಇಸ್ರೇಲರ ಮತ್ತು ಯೆಹೂದದ ರಾಜರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ.
8 ಯೋತಾವುನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಅರಸನಾದನು. ಅವನು ಹದಿನಾರು ವರ್ಷ ಜೆರುಸಲೇಮಿನಲ್ಲಿ ಆಳಿದನು.
9 ಯೋತಾವುನು ಸತ್ತಾಗ ಅವನ ಪೂರ್ವಿಕರೊಂದಿಗೆ ಸಮಾಧಿಮಾಡಿದರು. ಅವನನ್ನು ದಾವೀದನಗರದಲ್ಲಿ ಹೂಳಿಟ್ಟರು. ಯೋತಾವುನ ಮಗನಾದ ಆಹಾಜನು ತನ್ನ ತಂದೆಯ ನಂತರ ರಾಜನಾದನು.