Bible Versions
Bible Books

Leviticus 10 (ERVKN) Easy to Read Version - Kannadam

1 ತರುವಾಯ ಆರೋನನ ಪುತ್ರರಲ್ಲಿ ನಾದಾಬ್ ಮತ್ತು ಅಬೀಹು ಎಂಬಿಬ್ಬರು ಧೂಪ ಹಾಕಲು ಒಂದೊಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಬೇರೆ ಬೆಂಕಿಯನ್ನಿಟ್ಟು ಯೆಹೋವನ ಮುಂದೆ ಧೂಪಹಾಕಿದರು. ಯೆಹೋವನ ಆಜ್ಞೆಗನುಸಾರವಾದ ಬೆಂಕಿಯನ್ನು ಅವರು ಉಪಯೋಗಿಸಲಿಲ್ಲ.
2 ಆದ್ದ್ದರಿಂದ ಯೆಹೋವನಿಂದ ಬೆಂಕಿ ಹೊರಟುಬಂದು ಅವರಿಬ್ಬರನ್ನು ನಾಶಮಾಡಿತು. ಅವರು ಯೆಹೋವನ ಸನ್ನಿಧಿಯಲ್ಲಿ ಸತ್ತರು.
3 ಆಗ ಮೋಶೆ ಆರೋನನಿಗೆ, “ಯೆಹೋವನು ಹೇಳುವುದೇನೆಂದರೆ, ‘ನನ್ನ ಬಳಿಗೆ ಬರುವ ಯಾಜಕರು ನನ್ನನ್ನು ಗೌರವಿಸಬೇಕು. ಯಾಕೆಂದರೆ ನಾನು ಅವರ ಮೂಲಕ ಜನರಿಗೆ ಪ್ರಕಟಿಸಿಕೊಳ್ಳುವೆನು. ನಾನು ಪರಿಶುದ್ಧನೆಂದು ಅವರು ಮತ್ತು ಎಲ್ಲಾ ಜನರು ತಿಳಿದುಕೊಂಡು ನನ್ನನ್ನು ಘನಪಡಿಸಿಬೇಕು”‘ ಎಂದು ಹೇಳಿದನು. ಆದ್ದರಿಂದ ಆರೋನನು ತನ್ನ ಪುತ್ರರು ಸತ್ತಿದ್ದರ ಬಗ್ಗೆ ಏನೂ ಹೇಳದೆ ಸುಮ್ಮನಿದ್ದನು.
4 ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅವರ ಹೆಸರು ಮೀಶಾಯೇಲ್ ಮತ್ತು ಎಲ್ಸಾಫಾನ್. ಮೋಶೆಯು ಪುತ್ರರಿಗೆ, “ಪವಿತ್ರಸ್ಥ್ಧಳದ ಮುಂದೆ ಬಿದ್ದಿರುವ ನಿಮ್ಮ ಸಹೋದರರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿರಿ” ಎಂದು ಹೇಳಿದನು.
5 ಮಿಶಾಯೇಲ ಮತ್ತು ಎಲ್ಸಾಫಾನ ಮೋಶೆಯ ಮಾತಿಗೆ ವಿಧೇಯರಾದರು. ಅವರು ನಾದಾಬ್ ಮತ್ತು ಅಬೀಹು ಎಂಬವರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋದರು. ನಾದಾಬ್ ಮತ್ತು ಅಬೀಹು ತೊಟ್ಟುಕೊಂಡಿದ್ದ ವಿಶೇಷವಾದ ಹೆಣೆದ ಅಂಗಿಗಳು ಇನ್ನೂ ಅವರ ಮೃತಶರೀರಗಳ ಮೇಲಿದ್ದವು.
6 ಬಳಿಕ ಮೋಶೆ ಆರೋನನೊಡನೆ ಮತ್ತು ಅವನ ಪುತ್ರರಾದ ಎಲ್ಲಾಜಾರ್ ಮತ್ತು ಈತಾಮಾರ್ ಇವರೊಡನೆ ಮಾತಾಡಿದನು. ಮೋಶೆಯು ಅವರಿಗೆ, “ನೀವು ದುಃಖದಿಂದ ನಿಮ್ಮ ತಲೆಕೂದಲನ್ನು ಕೆದರಿಕೊಳ್ಳಬೇಡಿರಿ; ನಿಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಡಿರಿ. ಇಲ್ಲವಾದರೆ ನೀವೂ ಕೊಲ್ಲಲ್ಪಡುವಿರಿ. ಅಲ್ಲದೆ ಯೆಹೋವನು ಜನರೆಲ್ಲರ ಮೇಲೆ ಕೋಪಗೊಳ್ಳುವನು. ಇಸ್ರೇಲರೆಲ್ಲರೂ ನಿಮ್ಮ ಬಂಧುಗಳು. ಯೆಹೋವನು ನಾದಾಬ್ ಮತ್ತು ಅಬೀಹು ಅವರನ್ನು ಸುಟ್ಟುಹಾಕಿದ್ದರ ಬಗ್ಗೆ ಅವರು ದುಃಖಿಸಬಹುದು.
7 ಆದರೆ ನೀವು ದೇವದರ್ಶನಗುಡಾರದ ಬಾಗಿಲನ್ನು ಸಹ ಬಿಟ್ಟುಹೋಗಬಾರದು. ಇಲ್ಲವಾದರೆ ನೀವು ಸಾಯುವಿರಿ! ಯಾಕೆಂದರೆ, ಯೆಹೋವನ ಅಭಿಷೇಕತೈಲವು ನಿಮ್ಮ ಮೇಲಿದೆ” ಎಂದು ಹೇಳಿದನು. ಆದ್ದರಿಂದ ಆರೋನ, ಎಲ್ಲಾಜಾರ್ ಮತ್ತು ಈತಾಮಾರ್ ಮೋಶೆಯ ಮಾತಿಗೆ ವಿಧೇಯರಾದರು.
8 ಬಳಿಕ ಯೆಹೋವನು ಆರೋನನಿಗೆ,
9 “ನೀನು ಮತ್ತು ನಿನ್ನ ಪುತ್ರರು ದೇವದರ್ಶನದ ಗುಡಾರದೊಳಗೆ ಬರುವಾಗ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯಬಾರದು. ನೀವು ಅವುಗಳನ್ನು ಕುಡಿದರೆ ಸಾಯುವಿರಿ. ಕಟ್ಟಳೆಯು ನಿಮ್ಮ ಸಂತತಿಯವರಿಗೆ ಶಾಶ್ವತವಾಗಿದೆ.
10 ನೀವು ಪವಿತ್ರವಾದವುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಕುರಿತಾಗಿಯೂ ಶುದ್ಧವಾದವುಗಳ ಮತ್ತು ಅಶುದ್ಧವಾದವುಗಳ ಕುರಿತಾಗಿಯೂ ಸ್ಪಷ್ಟವಾಗಿ ವಿವೇಚನೆಯುಳ್ಳವರಾಗಿರಬೇಕು.
11 ಯೆಹೋವನು ಮೋಶೆಯ ಮೂಲಕ ಇಸ್ರೇಲ್ ಜನರಿಗೆ ಕೊಟ್ಟ ಎಲ್ಲಾ ಕಟ್ಟಳೆಗಳನ್ನು ಅವರಿಗೆ ಬೋಧಿಸುವುದು ನಿನ್ನ ಜವಾಬ್ದಾರಿಯಾಗಿದೆ” ಎಂದು ಹೇಳಿದನು.
12 ಆರೋನನಿಗೆ ಇನ್ನೂ ಜೀವಂತವಾಗಿದ್ದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಇಬ್ಬರು ಪುತ್ರರು ಇದ್ದರು. ಮೋಶೆಯು ಆರೋನನಿಗೆ ಮತ್ತು ಅವನ ಇಬ್ಬರು ಗಂಡುಮಕ್ಕಳಿಗೆ, “ಯಜ್ಞವೇದಿಕೆಯ ಮೇಲೆ ಅರ್ಪಿಸಿದ ಯಜ್ಞಗಳಲ್ಲಿಯೂ ಧಾನ್ಯನೈವೇದ್ಯದಲ್ಲಿಯೂ ಉಳಿದ ಭಾಗವನ್ನು ತೆಗೆದುಕೊಂಡು ನೀವು ತಿನ್ನಬೇಕು. ಆದರೆ ನೀವು ಅದಕ್ಕೆ ಹುಳಿಯನ್ನು ಸೇರಿಸದೆ ಯಜ್ಞವೇದಿಕೆಯ ಸಮೀಪದಲ್ಲಿಯೇ ತಿನ್ನಬೇಕು. ಯಾಕೆಂದರೆ ಸಮರ್ಪಣೆಯು ಬಹಳ ಪವಿತ್ರವಾಗಿದೆ.
13 ಅದನ್ನು ಪವಿತ್ರವಾದ ಸ್ಥಳದಲ್ಲಿ ಮಾತ್ರ ತಿನ್ನಬೇಕು. ಅದು ಯೆಹೋವನಿಗಾಗಿ ಅಗ್ನಿಯಲ್ಲಿ ಹೋಮವಾದ ಸಮರ್ಪಣೆಗಳಲ್ಲಿ ಒಂದು ಭಾಗವಾಗಿದೆ. ಯೆಹೋವನಿಗಾಗಿ ಬೆಂಕಿಯ ಮೂಲಕ ಸಮರ್ಪಿಸಿದವುಗಳಲ್ಲಿ ನಿನಗೂ ನಿನ್ನ ಗಂಡುಮಕ್ಕಳಿಗೂ ಇದು ಸೇರತಕ್ಕ ಪಾಲಾಗಿದೆ. ನಿಮಗೆ ಕಟ್ಟಳೆಯನ್ನು ಕೊಡಲು ನನಗೆ ಆಜ್ಞಾಪಿಸಲಾಗಿದೆ.
14 “ಮಾತ್ರವಲ್ಲದೆ ನೀನು, ನಿನ್ನ ಪುತ್ರರು ಮತ್ತು ನಿನ್ನ ಹೆಣ್ಣುಮಕ್ಕಳು ಯೆಹೋವನಿಗೆ ನೈವೇದ್ಯವಾಗಿ ನಿವಾಳಿಸಿದ ಎದೆಯ ಭಾಗವನ್ನು ಮತ್ತು ಅರ್ಪಿಸಲ್ಪಟ್ಟ ತೊಡೆಯನ್ನು ತಿನ್ನಬೇಕು. ನೀವು ಅವುಗಳನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿಲ್ಲ. ಆದರೆ ನೀವು ಅವುಗಳನ್ನು ಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಯಾಕೆಂದರೆ ಅವುಗಳು ಸಮಾಧಾನ ಯಜ್ಞಗಳಿಂದ ಬಂದವುಗಳಾಗಿವೆ. ಇಸ್ರೇಲರು ಕಾಣಿಕೆಗಳನ್ನು ದೇವರಿಗಾಗಿ ಕೊಡುತ್ತಾರೆ. ಜನರು ಪಶುಗಳಲ್ಲಿ ಕೆಲವು ಭಾಗಗಳನ್ನು ತಿನ್ನುತ್ತಾರೆ. ಆದರೆ ಎದೆಯ ಭಾಗವು ನಿಮ್ಮ ಪಾಲಾಗಿರುತ್ತದೆ.
15 ಜನರು ಪ್ರಾಣಿಗಳ ಕೊಬ್ಬನ್ನು ಅಗ್ನಿಯ ಮೂಲಕ ಹೋಮಮಾಡುವಾಗ, ಯಾಜಕರಿಗಾಗಿ ತೆಗೆದಿಟ್ಟ ತೊಡೆಯ ಭಾಗವನ್ನು ಮತ್ತು ನೈವೇದ್ಯವಾಗಿ ನಿವಾಳಿಸಬೇಕಾದ ಎದೆಯ ಭಾಗವನ್ನು ಯೆಹೋವನ ಸನ್ನಿಧಿಗೆ ತರಬೇಕು. ಅದು ನಿಮ್ಮ ಪಾಲಾಗಿರುವುದು. ಅದು ನಿನಗೂ ನಿನ್ನ ಮಕ್ಕಳಿಗೂ ಸೇರಿದ್ದು. ಯೆಹೋವನು ಆಜ್ಞಾಪಿಸಿದಂತೆ ಯಜ್ಞಗಳ ಭಾಗವು ಎಂದೆಂದೂ ನಿಮ್ಮ ಪಾಲಾಗಿರುತ್ತದೆ” ಎಂದು ಹೇಳಿದನು.
16 ಮೋಶೆಯು ಪಾಪಪರಿಹಾರಕ್ಕಾಗಿ ಸಮರ್ಪಿತವಾದ ಹೋತದ ಕುರಿತು ವಿಚಾರಿಸಿದಾಗ, ಅದನ್ನು ಸುಟ್ಟುಬಿಟ್ಟರೆಂದು ಕೇಳಿ ಆರೋನನ ಮತ್ತು ಅವನ ಪುತ್ರರಾದ ಎಲ್ಲಾಜಾರ್ ಮತ್ತು ಈತಾಮಾರ್‌ರವರ ಮೇಲೆ ಬಹುಕೋಪಗೊಂಡನು. ಮೋಶೆಯು,
17 “ನೀವು ಹೋತದ ಮಾಂಸವನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿತ್ತು. ಅದು ಬಹಳ ಪವಿತ್ರವಾದದ್ದಲ್ಲವೇ? ನೀವು ಯಾಕೆ ಅದನ್ನು ಯೆಹೋವನ ಸನ್ನಿಧಿಯಲ್ಲಿ ತಿನ್ನಲಿಲ್ಲ? ನೀವು ಜನರ ಪಾಪಪರಿಹಾರ ಮಾಡುವಂತೆಯೂ ಜನರ ದೋಷವನ್ನು ಪರಿಹಾರಮಾಡುವಂತೆಯೂ ಯೆಹೋವನು ಅದನ್ನು ನಿಮಗೆ ಕೊಟ್ಟನು.
18 ಹೋತದ ರಕ್ತವನ್ನು ಪವಿತ್ರಸ್ಥಳದ ಒಳಗಡೆ ತರಲಿಲ್ಲ. ನಾನು ಆಜ್ಞಾಪಿಸಿದಂತೆ ನೀವು ಅದರ ಮಾಂಸವನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿತ್ತು” ಅಂದನು.
19 ಆದರೆ ಆರೋನನು ಮೋಶೆಗೆ, “ನೋಡು ದಿನ ಇವರು ಯೆಹೋವನ ಸನ್ನಿಧಿಗೆ ಪಾಪಪರಿಹಾರಕ ಮತ್ತು ಸರ್ವಾಂಗಹೋಮಗಳನ್ನು ತಂದಿದ್ದರೂ ನನಗೆ ಆಪತ್ತು ಸಂಭವಿಸಿತು. ಹೀಗಿರುವಾಗ ನಾನು ಪಾಪಪರಿಹಾರಕ ಸಮರ್ಪಣೆಯ ಪಶುವಿನ ಮಾಂಸವನ್ನು ದಿನದಲ್ಲಿ ತಿಂದಿದ್ದರೆ ಯೆಹೋವನಿಗೆ ಒಳ್ಳೆಯದಾಗಿ ತೋರುತ್ತಿತ್ತೋ? ಇಲ್ಲ!” ಎಂದು ಹೇಳಿದನು.
20 ಮೋಶೆಯು ಮಾತನ್ನು ಕೇಳಿ ಒಪ್ಪಿಕೊಂಡನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×