Bible Versions
Bible Books

James 5 (ERVKN) Easy to Read Version - Kannadam

1 ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ.
2 ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ.
3 ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ.
4 ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.
5 ನಿಮ್ಮ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ.
6 ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.
7 ಸಹೋದರ ಸಹೋದರಿಯರೇ, ತಾಳ್ಮೆಯಿಂದಿರಿ, ಪ್ರಭುವಾದ ಯೇಸು ಪ್ರತ್ಯಕ್ಷನಾಗುತ್ತಾನೆ. ಆದ್ದರಿಂದ ಅಲ್ಲಿಯವರೆಗೆ ತಾಳ್ಮೆಯಿಂದಿರಿ. ತನ್ನ ಅಮೂಲ್ಯ ಬೆಳೆಯು ಭೂಮಿಯಿಂದ ಬರುವ ತನಕ ರೈತನು ತಾಳ್ಮೆಯಿಂದ ಕಾಯುತ್ತಾನೆ. ಮೊದಲ ಹಾಗೂ ಕೊನೆಯ ಮಳೆಯು ತನ್ನ ಬೆಳೆಯ ಮೇಲೆ ಸುರಿಯುವ ತನಕ ರೈತನು ತಾಳ್ಮೆಯಿಂದ ಕಾದಿರುತ್ತಾನೆ.
8 ನೀವೂ ತಾಳ್ಮೆಯಿಂದಿರಬೇಕು. ನಿಮ್ಮ ನಿರೀಕ್ಷೆಯನ್ನು ಬಿಡಬೇಡಿ. ಪ್ರಭು ಯೇಸು ಬೇಗನೆ ಪ್ರತ್ಯಕ್ಷನಾಗುವನು.
9 This verse may not be a part of this translation
10 ಸಹೋದರ ಸಹೋದರಿಯರೇ, ಪ್ರಭುವಿನ ಸಂದೇಶವನ್ನು ತಿಳಿಸಿದ ಪ್ರವಾದಿಗಳು ನಿಮಗೆ ಮಾದರಿಯಾಗಿರಲಿ. ಅವರು ಅನೇಕ ರೀತಿಯಲ್ಲಿ ಸಂಕಟವನ್ನು ಅನುಭವಿಸಿದರೂ ತಾಳ್ಮೆಯಿಂದಿದ್ದರು.
11 ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ಯೋಬನ ತಾಳ್ಮೆಯ ಬಗ್ಗೆ ನಿಮಗೆ ತಿಳಿದಿದೆ. ಯೋಬನು ಎಲ್ಲಾ ಬಗೆಯ ಸಂಕಟಗಳನ್ನು ಅನುಭವಿಸಿದ ಮೇಲೆ ಪ್ರಭುವು ಅವನಿಗೆ ಸಹಾಯ ಮಾಡಿದನು. ಪ್ರಭುವು ದಯೆಯಿಂದಲೂ ಕರುಣೆಯಿಂದಲೂ ತುಂಬಿದ್ದಾನೆಂದು ಇದು ತೋರಿಸುತ್ತದೆ.
12 ನನ್ನ ಸಹೋದರ ಸಹೋದರಿಯರೇ, ನೀವು ವಾಗ್ದಾನ ಮಾಡುವಾಗ ಆಣೆ ಇಡಬೇಡಿರಿ. ಇದು ಬಹಳ ಮುಖ್ಯವಾದದ್ದು. ನಿಮ್ಮ ಹೇಳಿಕೆಯನ್ನು ನಿರೂಪಿಸಲು ಪರಲೋಕದ, ಭೂಲೋಕದ ಮತ್ತು ಬೇರಾವುದರ ಹೆಸರನ್ನೂ ಬಳಸಬೇಡಿ. ಹೌದಾಗಿದ್ದರೆ, “ಹೌದು” ಎನ್ನಿರಿ. ಇಲ್ಲವಾಗಿದ್ದರೆ, “ಇಲ್ಲ” ಎನ್ನಿರಿ. ನೀವು ಹೀಗೆ ಮಾಡಿದರೆ, ನಿಮಗೆ ದೋಷಿಗಳೆಂಬ ತೀರ್ಪಾಗುವುದಿಲ್ಲ.
13 ನಿಮ್ಮಲ್ಲಿ ತೊಂದರೆಗೆ ಒಳಗಾಗಿರುವವನು ಪ್ರಾರ್ಥಿಸಬೇಕು. ನಿಮ್ಮಲ್ಲಿ ಸಂತೋಷದಿಂದಿರುವವನು ಹಾಡಬೇಕು.
14 ನಿಮ್ಮಲ್ಲಿ ಕಾಯಿಲೆಯಾಗಿರುವವನು ಸಭಾಹಿರಿಯರನ್ನು ಕರೆಯಿಸಬೇಕು. ಹಿರಿಯರು ಅವನಿಗೆ ಎಣ್ಣೆಯನ್ನು ಹಚ್ಚಿ, ಪ್ರಭುವಿನ ಹೆಸರಿನಲ್ಲಿ ಅವನಿಗೋಸ್ಕರ ಪ್ರಾರ್ಥಿಸಬೇಕು.
15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಕಾಯಿಲೆಯಲ್ಲಿರುವವನನ್ನು ಗುಣಪಡಿಸುತ್ತದೆ. ಪ್ರಭುವು ಅವನನ್ನು ಗುಣಪಡಿಸುತ್ತಾನೆ. ಒಂದುವೇಳೆ, ವ್ಯಕ್ತಿಯು ಪಾಪ ಮಾಡಿದ್ದರೆ, ಪ್ರಭುವು ಅವನನ್ನು ಕ್ಷಮಿಸುತ್ತಾನೆ.
16 ನೀವು ಮಾಡಿದ ತಪ್ಪುಗಳನ್ನು ಒಬ್ಬರಿಗೊಬ್ಬರು ಯಾವಾಗಲೂ ಹೇಳಿಕೊಳ್ಳಿರಿ. ಬಳಿಕ ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ನೀವು ಹೀಗೆ ಮಾಡಿದರೆ, ದೇವರು ನಿಮ್ಮನ್ನು ಗುಣಪಡಿಸುವನು. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಲವಾಗಿದೆ.
17 ಎಲೀಯನು ಸಹ ನಮ್ಮಂತೆಯೇ ಒಬ್ಬ ಮನುಷ್ಯನಾಗಿದ್ದನು. ಮಳೆ ಬಾರದಂತೆ ಅವನು ಪ್ರಾರ್ಥಿಸಿದಾಗ ಮೂರುವರೆ ವರ್ಷಗಳವರೆಗೆ ನಾಡಿನಲ್ಲಿ ಮಳೆಯೇ ಬೀಳಲಿಲ್ಲ!
18 ಬಳಿಕ ಎಲೀಯನು ಮಳೆ ಬರುವಂತೆ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿದು ಭೂಮಿಯಲ್ಲಿ ಮತ್ತೆ ಬೆಳೆಯು ಫಲಿಸಿತು.
19 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಬ್ಬನು ಸತ್ಯದಿಂದ ದೂರವಾಗಿ ಅಲೆದಾಡುತ್ತಿದ್ದರೆ, ಮತ್ತೊಬ್ಬನು ಅವನಿಗೆ ಸಹಾಯಮಾಡಿ ಅವನನ್ನು ಸತ್ಯಕ್ಕೆ ನಡೆಸಬೇಕು.
20 ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ಸರಿಯಾದ ಮಾರ್ಗಕ್ಕೆ ನಡೆಸುವವನು ಪಾಪಿಯ ಆತ್ಮವನ್ನು ಮರಣದಿಂದ ಪಾರುಮಾಡಿದವನೂ ಅನೇಕ ಪಾಪಗಳಿಗೆ ಕ್ಷಮಾಪಣೆಯಾಗುವಂತೆ ಮಾಡಿದವನೂ ಆಗುತ್ತಾನೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×