Bible Versions
Bible Books

Exodus 20 (ERVKN) Easy to Read Version - Kannadam

1 ಬಳಿಕ ಯೆಹೋವನು ದಶಾಜ್ಞೆಗಳನ್ನು ಅವರಿಗೆ ಕೊಟ್ಟನು:
2 “ಯೆಹೋವನೆಂಬ ನಾನೇ ನಿಮ್ಮ ದೇವರು. ಈಜಿಪ್ಟಿನಲ್ಲಿ ಗುಲಾಮರಾಗಿದ್ದ ನಿಮ್ಮನ್ನು ದೇಶದಿಂದ ಹೊರಗೆ ನಡಿಸಿದವನು ನಾನೇ.
3 “ನನ್ನನ್ನಲ್ಲದೆ ಬೇರೆ ಯಾವ ದೇವರುಗಳನ್ನೂ ನೀವು ಆರಾಧಿಸಬಾರದು.
4 “ನೀವು ಯಾವ ವಿಗ್ರಹಗಳನ್ನೂ ಮಾಡಬಾರದು. ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ನೀರಿನಲ್ಲಾಗಲಿ ಇರುವ ಯಾವುದೇ ವಸ್ತುವಿನ ರೂಪವನ್ನು ನೀವು ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜಿಸಲೂ ಬಾರದು.
5 ನಿಮ್ಮ ದೇವರಾದ ಯೆಹೋವನೆಂಬ ನನಗೆ ಸಲ್ಲತಕ್ಕ ಗೌರವವನ್ನು ನೀವು ಬೇರೆಯವರಿಗೆ ಸಲ್ಲಿಸಿದರೆ ನಾನು ನಿಮ್ಮನ್ನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪಮಾಡುವವರ ದೋಷಫಲವನ್ನು ಅವರ ಮೂರು ನಾಲ್ಕು ತಲೆಮಾರುಗಳವರೆಗೂ ಬರಮಾಡುವೆನು.
6 ಆದರೆ ನನ್ನ ಆಜ್ಞೆಗಳಿಗೆ ವಿಧೇಯರಾಗಿರುವವರಿಗೆ ಅವರ ಸಾವಿರ ತಲೆಮಾರುಗಳವರೆಗೂ ದಯೆತೋರಿಸುವೆನು.
7 “ನಿಮ್ಮ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಉಪಯೋಗಿಸಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಉಪಯೋಗಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
8 “ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಅದನ್ನು ಆಚರಿಸಿರಿ.
9 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ.
10 ಆದರೆ ಏಳನೆ ದಿನವು ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಲು ಮೀಸಲಾಗಿರುವ ವಿಶ್ರಾಂತಿ ದಿನವಾಗಿದೆ. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. ನೀವಾಗಲಿ ನಿಮ್ಮ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಸೇವಕರಾಗಲಿ ಸೇವಕಿಯರಾಗಲಿ ನಿಮ್ಮ ಪಶುಗಳಾಗಲಿ ನಿಮ್ಮಲ್ಲಿರುವ ವಿದೇಶಿಯರಾಗಲಿ ಕೆಲಸ ಮಾಡಬಾರದು.
11 ಯಾಕೆಂದರೆ ಯೆಹೋವನು ಆರು ದಿನಗಳಲ್ಲಿ ಕೆಲಸ ಮಾಡಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿದನು. ಆದ್ದರಿಂದ ಯೆಹೋವನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ತನ್ನ ದಿನವನ್ನಾಗಿ ಮಾಡಿದನು.
12 “ನೀವು ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು; ನೀವು ಸನ್ಮಾನಿಸಿದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.
13 “ನೀವು ಯಾರನ್ನೂ ಕೊಲೆ ಮಾಡಬಾರದು.
14 “ನೀವು ವ್ಯಭಿಚಾರ ಮಾಡಬಾರದು.
15 “ನೀವು ಕದಿಯಬಾರದು.
16 “ನೀವು ಬೇರೆಯವರ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.
17 “ನೀವು ನೆರೆಯವನ ಮನೆಯನ್ನು ಆಶೀಸಬಾರದು. ನೀವು ಮತ್ತೊಬ್ಬನ ಹೆಂಡತಿಯನ್ನಾಗಲಿ ಸೇವಕರನ್ನಾಗಲಿ ದಾಸಿಯರನ್ನಾಗಲಿ ಪಶುಗಳನ್ನಾಗಲಿ ಆಶಿಸಬಾರದು.
18 ಆಗ ಅಲ್ಲಿದ್ದ ಜನರು ಗುಡುಗಿನ ಧ್ವನಿಯನ್ನು ಕೇಳಿದರು; ಬೆಟ್ಟದ ಮೇಲೆ ಮಿಂಚುಗಳನ್ನು ನೋಡಿದರು; ಹೊಗೆಯು ಬೆಟ್ಟದಿಂದ ಏರುವುದನ್ನು ಕಂಡರು. ಅವರೆಲ್ಲರೂ ಭಯದಿಂದ ನಡುಗಿದರು; ಬೆಟ್ಟದಿಂದ ದೂರದಲ್ಲಿದ್ದುಕೊಂಡು ಅವುಗಳನ್ನೆಲ್ಲಾ ಗಮನಿಸಿದರು.
19 ಆಗ ಜನರು ಮೋಶೆಗೆ, “ನೀನು ನಮ್ಮೊಡನೆ ಮಾತಾಡು; ನಾವು ನಿನಗೆ ಕಿವಿಗೊಡುವೆವು. ಆದರೆ ಯೆಹೋವನು ನಮ್ಮೊಡನೆ ಮಾತಾಡದಿರಲಿ. ಇಲ್ಲವಾದರೆ ನಾವು ಸಾಯುವೆವು” ಅಂದರು.
20 ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ, ಯೆಹೋವನು ನಿಮ್ಮನ್ನು ಪರೀಕ್ಷಿಸಲು ಬಂದಿದ್ದಾನೆ. ನೀವು ಆತನಲ್ಲಿ ಭಕ್ತಿಯುಳ್ಳವರಾಗಿರಬೇಕೆಂದು ಆತನು ಬಯಸುತ್ತಾನೆ. ಆಗ ನೀವು ಪಾಪ ಮಾಡುವುದಿಲ್ಲ” ಎಂದು ಹೇಳಿದನು.
21 ದೇವರ ಸನ್ನಿಧಾನಕ್ಕೆ ಹೋಗಲು ಮೋಶೆಯು ಕಾರ್ಮುಗಿಲಿನೊಳಗೆ ಹೋದಾಗ, ಜನರು ಬೆಟ್ಟದಿಂದ ದೂರ ನಿಂತುಕೊಂಡರು.
22 ಆಗ ಯೆಹೋವನು ಸಂಗತಿಗಳನ್ನು ಇಸ್ರೇಲರಿಗೆ ತಿಳಿಸಲು ಮೋಶೆಗೆ ಆಜ್ಞಾಪಿಸಿದನು: “ನಾನು ಪರಲೋಕದಿಂದ ನಿಮ್ಮ ಸಂಗಡ ಮಾತಾಡಿದ್ದನ್ನು ನೀವು ನೋಡಿದ್ದೀರಿ.
23 ಆದ್ದರಿಂದ ನನ್ನೊಡನೆ ಸ್ಪರ್ಧಿಸಲು, ನೀವು ಬೆಳ್ಳಿಬಂಗಾರಗಳಿಂದ ಮೂರ್ತಿಗಳನ್ನು ಮಾಡಿಕೊಳ್ಳಬಾರದು. ಸುಳ್ಳು ದೇವರುಗಳನ್ನು ನೀವು ಮಾಡಿಕೊಳ್ಳಲೇಬಾರದು.”
24 “ಒಂದು ವಿಶೇಷ ಯಜ್ಞವೇದಿಕೆಯನ್ನು ನನಗೋಸ್ಕರ ಮಣ್ಣಿನಿಂದ ಕಟ್ಟಿರಿ. ಯಜ್ಞವೇದಿಕೆಯ ಮೇಲೆ ಕುರಿದನಗಳನ್ನು ನನಗೆ ಸರ್ವಾಂಗ ಹೋಮಗಳನ್ನಾಗಿಯೂ ಸಮಾಧಾನ ಯಜ್ಞಗಳನ್ನಾಗಿಯೂ ಸಮರ್ಪಿಸಿರಿ. ನಾನು ನಿಮಗೆ ಹೇಳುವ ಪ್ರತಿಯೊಂದು ಸ್ಥಳದಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಳ್ಳಲು ಹೀಗೆಯೇ ಮಾಡಿರಿ. ಆಗ ನಾನು ಬಂದು ನಿಮ್ಮನ್ನು ಆಶೀರ್ವದಿಸುವೆನು.
25 ನೀವು ಯಜ್ಞವೇದಿಕೆಯನ್ನು ಕಲ್ಲುಗಳಿಂದ ಕಟ್ಟಬೇಕೆಂದಿದ್ದರೆ, ಉಳಿಯಿಂದ ಕೆತ್ತಿದ ಕಲ್ಲುಗಳನ್ನು ಉಪಯೋಗಿಸಬೇಡಿರಿ. ಅಂಥ ಕಲ್ಲುಗಳನ್ನು ಉಪಯೋಗಿಸಿದರೆ, ಯಜ್ಞವೇದಿಕೆಯು ಅಪವಿತ್ರವಾಗುವುದು.
26 ಅಲ್ಲದೆ ಯಜ್ಞವೇದಿಕೆಯನ್ನು ಹತ್ತುವುದಕ್ಕೆ ಮೆಟ್ಟಲುಗಳನ್ನು ಮಾಡಬಾರದು. ಮೆಟ್ಟಲುಗಳಿದ್ದರೆ ಜನರು ತಲೆ ಎತ್ತಿ ಯಜ್ಞವೇದಿಕೆಯನ್ನು ನೋಡುವಾಗ ನಿಮ್ಮ ರಹಸ್ಯಾಂಗವು ಕಾಣಿಸೀತು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×