Matthew 28 (ERVKN) Easy to Read Version - Kannadam

1 ಸಬ್ಬತ್ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ಧಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಹೋದರು.
2 ಆಗ ಭೀಕರ ಭೂಕಂಪವಾಯಿತು. ಪ್ರಭುವಿನ ದೂತನೊಬ್ಬನು ಆಕಾಶದಿಂದ ಇಳಿದುಬಂದನು. ದೇವದೂತನು ಸಮಾಧಿಯ ಬಳಿಗೆ ಹೋಗಿ, ಸಮಾಧಿಯ ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಬಂಡೆಯ ಮೇಲೆ ಕುಳಿತುಕೊಂಡನು.
3 ದೇವದೂತನು ಮಿಂಚಿನಂತೆ ಪ್ರಕಾಶಿಸುತ್ತಿದ್ದನು. ಅವನ ಬಟ್ಟೆಗಳು ಮಂಜಿನಂತೆ ಬಿಳುಪಾಗಿದ್ದವು.
4 ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಕಂಡು ಬಹಳವಾಗಿ ಹೆದರಿ ಭಯದಿಂದ ನಡುಗುತ್ತಾ ಸತ್ತಂತಾದರು.
5 ದೇವದೂತನು ಸ್ತ್ರೀಯರಿಗೆ, “ಹೆದರಬೇಡಿ, ಶಿಲುಬೆಗೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರೆಂಬುದು ನನಗೆ ತಿಳಿದಿದೆ.
6 ಆದರೆ ಯೇಸು ಇಲ್ಲಿಲ್ಲ. ಆತನು ತಾನು ತಿಳಿಸಿದ್ದಂತೆಯೇ ಪುನರುತ್ಥಾನ ಹೊಂದಿದ್ದಾನೆ. ಬನ್ನಿ, ಆತನ ದೇಹವಿದ್ದ ಸ್ಥಳವನ್ನು ನೋಡಿ.
7 ಬೇಗನೆ ಹೋಗಿ ಆತನ ಶಿಷ್ಯರಿಗೆ, ‘ಯೇಸು ಪುನರುತ್ಥಾನ ಹೊಂದಿದ್ದಾನೆ. ಆತನು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ನಿಮಗಿಂತ ಮುಂಚೆಯೇ ಆತನು ಅಲ್ಲಿರುತ್ತಾನೆ. ನೀವು ಆತನನ್ನು ಅಲ್ಲಿ ನೋಡುತ್ತೀರಿ’ ಎಂದು ಹೇಳಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ” ಎಂದನು.
8 ಕೂಡಲೇ ಸ್ತ್ರೀಯರು ಭಯದಿಂದಲೂ ಸಂತೋಷದಿಂದಲೂ ಸಮಾಧಿಯಿಂದ ಹೊರಟರು. ನಡೆದ ಸಂಗತಿಯನ್ನು ಶಿಷ್ಯರಿಗೆ ತಿಳಿಸಲು ಅವರು ಓಡಿಹೋಗುತ್ತಿರಲು,
9 ಯೇಸು ಅವರ ಮುಂದೆ ಪ್ರತ್ಯಕ್ಷನಾಗಿ, “ನಿಮಗೆ ಶುಭವಾಗಲಿ” ಎಂದನು. ಸ್ತ್ರೀಯರು ಯೇಸುವಿನ ಬಳಿಗೆ ಹೋಗಿ, ಆತನ ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು.
10 ಯೇಸು ಸ್ತ್ರೀಯರಿಗೆ, “ಹೆದರಬೇಡಿ, ನನ್ನ ಸಹೋದರರ ಬಳಿಗೆ ಹೋಗಿ ಗಲಿಲಾಯಕ್ಕೆ ಬರಲು ತಿಳಿಸಿರಿ. ಅವರು ನನ್ನನ್ನು ಅಲ್ಲಿ ಕಾಣುವರು” ಎಂದು ಹೇಳಿದನು.
11 ಸ್ತ್ರೀಯರು ಶಿಷ್ಯರಿಗೆ ತಿಳಿಸಲು ಹೋದರು. ಇತ್ತ ಸಮಾಧಿಯನ್ನು ಕಾಯುತ್ತಿದ್ದ ಕೆಲವು ಸೈನಿಕರು ನಗರದೊಳಕ್ಕೆ ಹೋಗಿ ನಡೆದ ಸಂಗತಿಯನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು.
12 ಆಗ ಮಹಾಯಾಜಕರು ಹಿರಿಯ ಯೆಹೂದ್ಯರನ್ನು ಭೇಟಿಮಾಡಿ ಚರ್ಚಿಸಿದರು ಮತ್ತು ಸೈನಿಕರಿಗೆ ಹೆಚ್ಚು ಹಣಕೊಟ್ಟು ಅವರಿಂದ ಸುಳ್ಳು ಹೇಳಿಸುವ ಉಪಾಯವನ್ನು ಮಾಡಿದರು.
13 ಅವರು ಸೈನಿಕರಿಗೆ, “ರಾತ್ರಿ ವೇಳೆಯಲ್ಲಿ ನಾವು ನಿದ್ರಿಸುತ್ತಿದ್ದಾಗ ಯೇಸುವಿನ ಶಿಷ್ಯರು ಬಂದು ಅವನ ದೇಹವನ್ನು ಕದ್ದೊಯ್ದರೆಂದು ಜನರಿಗೆ ತಿಳಿಸಿರಿ.
14 ಇದು ರಾಜ್ಯಪಾಲನಿಗೆ ಗೊತ್ತಾದರೂ ನಾವು ಅವನನ್ನು ಸಮಾಧಾನಪಡಿಸುತ್ತೇವೆ ಮತ್ತು ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳತ್ತೇವೆ” ಎಂದು ಹೇಳಿದರು.
15 ಸೈನಿಕರು ಹಣವನ್ನು ತೆಗೆದುಕೊಂಡು, ಅವರು ಹೇಳಿದಂತೆಯೇ ಮಾಡಿದರು. ಕಥೆಯು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿಕೊಂಡಿದೆ.
16 ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೊರಟು ಯೇಸು ತಿಳಿಸಿದ್ದ ಬೆಟ್ಟಕ್ಕೆ ಬಂದರು.
17 ಶಿಷ್ಯರು ಬೆಟ್ಟದ ಮೇಲೆ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು. ಆದರೆ ಕೆಲವು ಶಿಷ್ಯರು ಆತನೇ ನಿಜವಾದ ಯೇಸು ಎಂಬುದನ್ನು ನಂಬಲಿಲ್ಲ.
18 ಆದ್ದರಿಂದ ಯೇಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಲೋಕದ ಅಧಿಕಾರವೆಲ್ಲವನ್ನು ನನಗೆ ಕೊಡಲಾಗಿದೆ.
19 ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರೆಲ್ಲರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ನಾನ ಮಾಡಿಸಿ.
20 ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ. ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.

English

  • Versions

Tamil

  • Versions

Hebrew

  • Versions

Greek

  • Versions

Malayalam

  • Versions

Hindi

  • Versions

Telugu

  • Versions

Kannada

  • Versions

Gujarati

  • Versions

Punjabi

  • Versions

Urdu

  • Versions

Bengali

  • Versions

Oriya

  • Versions

Marathi

  • Versions
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×